ಎಲುಚಿಕಿತ್ಸೆ: ಎಲ್ಲ ರೋಗಗಳಿಗೂ ಕೀಲುಗಳಲ್ಲೊ ಅವುಗಳ ಸುತ್ತುಮುತ್ತಲೊ ಏನಾದರೂ ಆಯ ತಪ್ಪಿರುವುದೇ ಕಾರಣವೆಂದುಕೊಂಡು, ಮದ್ದುಗಳ ನೆರವಿಲ್ಲದೆ ಕೇವಲ ಕೈಪಾಟಿಂದ (ಮೆನಿಷ್ಯಲೇಷನ್) ಸರಿಪಡಿಸುವ ಒಂದು ಬಗೆಯ ಅಮೆರಿಕದ ಚಿಕಿತ್ಸಾಪದ್ದತಿ (ಆಸ್ಟಿಯೊಪತಿ). ಈ ಕಲ್ಪನೆಗೆ ಮೂಲ ಕಾರಣನಾದ ಆಂಡ್ರೊಥಾಮಸ್ ಸ್ಟಿಲ್ಲನ ಅಭಿಪ್ರಾಯದಲ್ಲಿ ಮದ್ದುಗಳು ವಿಷಕರ, ಅಲ್ಲದೆ ಮೂಳೆ, ಸ್ನಾಯು, ಕೀಲು, ತಂತುಗಟ್ಟು (ಲಿಗಮೆಂಟ್) ಮತ್ತಿತರ ಯಾವುದೇ ಊತಕದಲ್ಲಿ ರೋಗದ ಅಂಗಾಂಶ ಗಾಯ (ಲೀಷನ್) ತೋರಬಹುದು. 

ಪೆಟ್ಟು, ಗಾಯ, ಒತ್ತಡ, ಸೊಂಕುಗಳಿಂದಲೊ ಇನ್ನೆಲ್ಲೊ ರೋಗವೆದ್ದುದರ ಹಿಮ್ಮುರಿಗೆಯಾಗೊ (ರಿಪ್ಲೆಕ್ಕಸ್ಲಿ), ಕೇವಲ ನರಬೇನೆಯ ಪರಿಣಾಮವಾಗೊ ಹೀಗಾಗಬಹುದು. ಇದರಿಂದ, ಒಂದೆಡೆ ಹಿಡಿದುಕೊಂಡಂತೆ ಬಿಗುವಾಗಿ, ಆ ಭಾಗದ ಕೆಲಸ ಕುಂದಿ, ಇಲ್ಲವೇ ಅಕ್ಕಪಕ್ಕಗಳ ಊತಕಗಳಲ್ಲಿ ರಕ್ತದ ಹರಿವು ನಿಧಾನವಾಗಿ, ಆಮ್ಲ ರಕ್ತವಾಗಿ (ಅಸಿಡೇಮಿಯ) ಹತ್ತಿರ ಇರುವ ನರಗಳನ್ನು ಕೆರಳಿಸುವುದು. ಇದರಿಂದಾಗಿ ಆ ನರಗಳು ಹೋಗಿ ಸೇರುವ ದೂರದ ಅಂಗಗಳಿಗೂ ರಕ್ತ ಹರಿವು ತಗ್ಗಿ ತೊಂದರೆಯಾಗುತ್ತದೆ. ಕರುಳುವಾಳುರಿತ (ಅಪೆಂಡಿಸೈಟಿಸ್)  
ಆಗುವುದು ಒಂದು ಉದಾಹರಣೆ. ಕೀಲುಗಳು ಆಯತಪ್ಪಿದಾಗ (ಸಬ್ ಲಕ್ಸೇಷನ್) ಉಂಟಾಗುವ ಅಂಗಾಂಶಗಾಯಗಳ ದೆಸೆಯಿಂದ ಸೊಂಕುಗಳನ್ನು ಎದುರಿಸಲು ಮೈ ತನ್ನದೇ ಆದ ಜೀವಿವಿಷರೋಧಕಗಳು (ಆಂಟಿಟಾಕ್ಸಿನ್ಸ್‌) ಮತ್ತು ನಿರೋಧವಸ್ತುಗಳನ್ನು (ಆಂಟಿಬಾಡೀಸ್) ತಯಾರಿಸಿಕೊಳ್ಳುವ ಬಲಕ್ಕೆ ಅಡ್ಡಿಯಾಗುತ್ತದೆ. ಇವೆಲ್ಲವನ್ನೂ ಸರಿಪಡಿಸಬೇಕಾದರೆ ದೇಹವನ್ನು ಸಮಸ್ಥಿತಿಗೆ ತಂದು ಅದು ಮತ್ತೆ ತನ್ನ ಕೆಲಸಗಳನ್ನು ನಿರ್ವಹಿಸುವಂತೆ ಮಾಡಬೇಕು. ಇದು ಬರಿಯ ಕೈಗಳಿಂದ ಕೈಗೊಳ್ಳುವ ಕೈಪಾಟಿನಿಂದ ಸಾಧ್ಯ ಎನ್ನುವುದು ಸ್ಟಿಲ್ಲನ ಮತ (1874).

ಇತ್ತೀಚೆಗೆ ಈ ಚಿಕಿತ್ಸಾ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಬಹುಮಟ್ಟಿಗೆ ಎಲ್ಲ ರೋಗಗಳಿಂದಲೂ ತೇರ್ಗಡೆಯಾಗುವ ಬಲ ಮೈಗೆ ಇದೆಯೆಂದೂ ಭೌತಿಕ, ರಾಸಾಯನಿಕ, ಪೋಷಕ ಅಂಶಗಳು ಆರೋಗ್ಯದ ಮಟ್ಟದ ಮೇಲೆ ಪರಿಣಾಮ ಬೀರುವುವೆಂದೂ ಅನೇಕ ರೋಗಗಳಲ್ಲಿ ಮದ್ದು, ಶಸ್ತ್ರವೈದ್ಯ ಆಗಬೇಕೆಂದೂ ಈ ಪದ್ಧತಿಯವರು ಈಗ ಒಪ್ಪಿಕೊಂಡರೂ ಅವರ ಅಂಗಾಂಶಗಾಯಗಳ ಹುಟ್ಟಿನ ಕಲ್ಪನೆ ಮಾತ್ರ ಬದಲಾಗಿಲ್ಲ. ಇದನ್ನು ಸ್ಟಿಲ್ ಮೊದಲು ಒಪ್ಪಿರಲಿಲ್ಲ. ಬೆನ್ನೆಲುಬುಗಳ ನಡುವಣ ಕೀಲುಗಳ ಅರೆಕೀಲ್ತಪ್ಟಿಕೆಗಳು ಘನದರ್ಶಕ (ಸ್ಟಿರಿಯೊಸ್ಕೋಪಿಕ್) ಎಕ್ಸ್‌ಕಿರಣ ಪರೀಕ್ಷೆಗಳಲ್ಲಿ ಕಂಡರು ಅವು ತೀರ ಸಾಮಾನ್ಯ ಶಸ್ತ್ರಕ್ರಿಯೆಗೆ ತಕ್ಕವಲ್ಲ. ಅವುಗಳಿಂದ ಯಾರೂ ಸಾಯುವುದೂ ಇಲ್ಲ. ಮುಖ್ಯವಾಗಿ ಬೆನ್ನೆಲುಬಿನ ಕೀಲುಗಳಲ್ಲೂ ಅವುಗಳ ಸುತ್ತಲೂ ಅಲ್ಲಲ್ಲಿ ನೋವು, ಕೋಮಲತೆ, ಸ್ನಾಯು ಸೆಳೆತ, ಚಲನೆ ಮಿತಿಗೊಂಡಿರಬಹುದು. ಎಷ್ಟೊ ವೇಳೆ ದೂರದ ಅಂಗಗಳಲ್ಲಿ ಏರುಪೇರು ಮಾಡುವಂತಿದ್ದರೂ ಇವು ಕೇವಲ ರೋಗ ಲಕ್ಷಣಗಳೇ ಹೊರತು, ಇವೇ ರೋಗಗಳಲ್ಲ, ಇನ್ನೆಲ್ಲೂ ಗೊತ್ತಾದ ರೋಗಕಾಣದಿದ್ದರು ಬಹಳ ಮಂದಿಯಲ್ಲಿ ಕೂಡಲೇ ಶಾಶ್ವತ ಅಥವಾ ತಾತ್ಕಾಲಿಕ ಶಮನಕ್ಕಾಗಿ ಬರೀ ಕೈಪಾಟನ್ನೇ ಬಳಸಬಹುದು. ಮಿತಿಮೀರಿ ಚಿಕಿತ್ಸೆ ಮಾಡುವುದು ಬೇಕಿಲ್ಲವಾದರೂ ಕೈಪಾಟು ಕೈಗೊಳ್ಳುವುದೂ ತರವಲ್ಲ. ಮೈಯಲ್ಲಿ ಇನ್ನೆಲ್ಲಾದರೂ ಗೊತ್ತಾದ ರೋಗವಿದ್ದು ಈ ಲಕ್ಷಣಗಳ ಕಂಡುಬಂದರೆ, ಕೈಪಾಟು ಆಗಲೇಬೇಕೆಂದಿಲ್ಲ. ಇದನ್ನು ಮಾಡಿದಾಗಲೂ ಎಂದಿನ ವ್ಯೆದ್ಯಚಿಕಿತ್ಸೆಯ ವಿಧಾನಗಳ ಜೊತೆಗೆ ಇದು ಇರುವುದೇ ಹೊರತು ಅದರ ಬದಲಾಗಿ ಅಲ್ಲ. ಎಲ್ಲ ರೋಗಗಳೂ ಈ ಪದ್ಧತಿಯಿಂದಲೇ ಖಂಡಿತವಾಗಿ ವಾಸಿಯಾಗುವುವೆಂಬ ಸ್ಟಿಲ್ಲನ ಹಳೆಯ ಕಲ್ಪನೆ ಈಗ ಉಳಿದಿಲ್ಲ. 

ಮೊಟ್ಟಮೊದಲು ಸ್ಟಿಲ್ 1874ರ ಜೂನ್ 22ರಲ್ಲಿ ತನ್ನ ಕಲ್ಪನೆಯನ್ನು ಸಾರಿ ಹೇಳಿದರೂ ಅಮೆರಿಕದ ಒಂದು ಎಲುಚಿಕಿತ್ಸೆಯ ಶಾಲೆ ತೆರೆದುದು 1892ರಲ್ಲಿ 1964ರ ಹೊತ್ತಿಗೆ ಇಡೀ ಅಮೆರಿಕದ ಸಂಸ್ಥಾನಗಳಲ್ಲಿ 6 ಶಾಲೆಗಳಿದ್ದವು. ಅಂದಿನ ವೈದ್ಯಶಾಸ್ತ್ರ ಶಾಲೆಗಳ ಹಾಗೇ ಇವೂ ವೈದ್ಯಪಾಠಗಳು, ಶಿಕ್ಷಣ, ಪರೀಕ್ಷೆಗಳಲ್ಲಂತೂ ಎಷ್ಟೊ ನಡೆಯದು. ಬ್ರಿಟನಿನಲ್ಲಿ 2 ಶಿಕ್ಷಣ ಕೇಂದ್ರಗಳಿವೆ. ಲಂಡನ್ನಿನ ಎಲುಚಿಕಿತ್ಸೆಯ ಕಾಲೇಜಿನಲ್ಲಿ, ಒಂದು ಕಾಲು ವರ್ಷಗಳ ಶಿಕ್ಷಣಕ್ಕೆ ವೈದ್ಯ ಪದವೀಧರರು ಮಾತ್ರ ಸೇರಬಹುದಾದರೂ ಎಲುಚಿಕಿತ್ಸೆಯ ಬ್ರಿಟಿಷ್ ಶಾಲೆಯಲ್ಲಿ 4-5 ವರ್ಷಗಳ ತರಬೇತಿಗೆ ಬೇರೆಯವರೂ ಸೇರಬಹುದು. ಇವೆರಡರಲ್ಲೂ ಎಲುಚಿಕಿತ್ಸೆಗೆ ಗಮನ ಕೊಡುವುದು ಹೆಚ್ಚು. ಲಂಡನ್ ಶಾಲೆ ಅಮೆರಿಕದ ಎಲುಚಿಕಿತ್ಸೆ ಸಂಘಕ್ಕೆ ಸೇರದೆಂದು ಹೇಳಿಕೊಳ್ಳುತ್ತದೆ. ಇನ್ನೊಂದು ಗ್ರೇಟ್ಬ್ರಿಟನ್ನಿನ ಎಲುಚಿಕಿತ್ಸಕಸಂಘದ ಮೇಲ್ವಿಚಾರಣೆಯಲ್ಲಿದೆ. ಎಲುಚಿಕಿತ್ಸಕರ ಒಂದು ಮಂಡಲಿಯೂ ನೊಂದಣಿಯೂ (ರಿಜಿಸ್ಟರ್) ಇವೆ. ಬಹುಪಾಲು ಲಂಡನ್ ಶಾಲೆಯಲ್ಲೇ ಕಲಿತ ಬಹಳ ಮಂದಿ ಎಲುಚಿಕಿತ್ಸಕರು ಫ್ರಾನ್ಸಿನಲ್ಲಿದ್ದಾರೆ. ಹೀಗೆ ಆಸ್ಟ್ರೇಲಿಯ, ನ್ಯೂಜಿಲೆಂಡ್, ವೆಸ್ಟ್‌ ಇಂಡೀಸ್, ಭಾರತ, ದಕ್ಷಿಣ ಆಫ್ರಿಕಗಳಲ್ಲೂ ಅಲ್ಲಲ್ಲಿ ಈ ಚಿಕಿತ್ಸಾ ವಿಧಾನ ಅನುಸರಣೆಯಲ್ಲಿದೆ.	(ಎಂ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ